ಕೆನಡಿಯನ್ ಸಾಹಿತ್ಯ	
	
ಕೆನಡ ದ್ವಿಭಾಷಾ ಮತ್ತು ದ್ವಿಸಾಂಸ್ಕøತಿಕ ರಾಷ್ಟ್ರವಾದ್ದರಿಂದ ಅಲ್ಲಿ ಏಕಸ್ವರೂಪವಾದ ರಾಷ್ಟ್ರೀಯ ಸಾಹಿತ್ಯ ಕಂಡುಬರುವುದಿಲ್ಲ. ಅಲ್ಲಿಗೆ ಹೋಗಿ ನೆಲೆಸಿದವರು ಕೆನಡ ದೇಶ, ಇತಿಹಾಸ, ಪ್ರಕೃತಿ, ವೀರರ ಸಾಹಸ ಕಾರ್ಯಗಳು ಮುಂತಾದವನ್ನು ಕುರಿತು ತಂತಮ್ಮ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ತತ್ಪರಿಣಾಮವಾಗಿ ಇಂಗ್ಲಿಷ್-ಕೆನಡಿಯನ್ ಮತ್ತು ಫ್ರೆಂಚ್-ಕೆನಡಿಯನ್ ಸಾಹಿತ್ಯಗಳು ರೂಪುಗೊಂಡಿವೆ.

ಇಂಗ್ಲಿಷ್-ಕೆನಡಿಯನ್ ಸಾಹಿತ್ಯ

18ನೆಯ ಶತಮಾನದಲ್ಲಿ ಮತ್ತು 19ನೆಯ ಶತಮಾನದ ಪ್ರಾರಂಭದಲ್ಲಿ ಅಲೆಕ್ಸಾಂಡರ್ ಹೆನ್ರಿ, ಸಾಮ್ಯುಯಲ್ ಹರ್ನ್ ಮತ್ತು ಸರ್ ಅಲೆಕ್ಸಾಂಡರ್ ಮೆಕೆನ್ಸಿ ಮೊದಲಾದ ಪ್ರವಾಸಿಗರು ಬರೆದ ದೇಶಾಟನೆಗಳ ಹಾಗೂ ಸಾಹಸಕಾರ್ಯಗಳ ವಿವರಣೆಗಳಿಂದ ಕೂಡಿದ ಸಾಹಿತ್ಯ ಚೆನ್ನಾಗಿದೆ. 

ಹತ್ತೊಂಭತ್ತನೆ ಶತಮಾನದ ಅದಿಭಾಗದ ಮುಖ್ಯ ಕವಿಗಳು ಅಲಿವರ್ ಗೋಲ್ಡ್‍ಸ್ಮಿತ್ (ಇವನು ಇದೇ ಹೆಸರಿನ ಇಂಗ್ಲಿಷ್ ಕವಿಯ ಮೊಮ್ಮಗ), ಟಿ.ಸಿ.ಹ್ಯಾಲಿಬರ್ಟನ್ ಮತ್ತು ಜೋಸೆಫ್ ಹೊ. ಗೋಲ್ಡ್‍ಸ್ಮಿತ್ತನಲ್ಲಿ ನೋವಸ್ಕೋಷಿಯ ಬಗ್ಗೆ ಆತನಿಗಿರುವ ಪ್ರಾದೇಶಿಕ ಮಮತೆ ಎದ್ದುಕಾಣುತ್ತದೆ. ದಿ ರೈಸಿಂóಗ್ ವಿತ್ ಈಸ್ó ಎಂಬ ಕವನದಲ್ಲಿ ಪ್ರದೇಶಾಭಿಮಾನ ಸ್ಪಷ್ಟವಾಗಿ ವ್ಯಕ್ತವಾಗಿದೆ. ಅಲ್ಲದೆ ತಮ್ಮ ನಾಡಿನ ಅಭ್ಯುದಯ, ಏಳಿಗೆ ಬಗ್ಗೆ ಜನಗಳಿಗಿರುವ ಉತ್ಸಾಹ, ಭರವಸೆಗಳನ್ನೂ ಈ ಕವನ ಪ್ರತಿಬಿಂಬಿಸುತ್ತದೆ. ಸ್ವಾರಸ್ಯಪೂರ್ಣವಾದ ವರ್ಣನೆ ಇದೆಯಾದರೂ ಇವನ ತಾತನ ಕವನ ದಿ ಡಿಸರ್ಟೆಡ್ ವಿಲೇಜ್‍ಗೆ ಹೋಲಿಸಿದಾಗ ಕವಿಯ ಕಾವ್ಯಪ್ರತಿಭೆಯ ಕೊರತೆಗಳು ಕಂಡುಬರುತ್ತವೆ. ಇದರ ಪ್ರಾಮುಖ್ಯ ಪ್ರಾದೇಶಿಕ. ಗೋಲ್ಡ್‍ಸ್ಮಿತ್ತನ ಹಾಗೆ ಜೋಸೆಫ್ ಹೊ ಸಹ ಒಬ್ಬ ಪ್ರಾದೇಶಿಕ ಕವಿ. ಆದರೆ ಇವನಲ್ಲಿ ನೋವಸ್ಕೋಷಿಯ ಬಗ್ಗೆ ಆಮಿತವಾದ ಪ್ರಾದೇಶಿಕ ಪ್ರೇಮ ಕಂಡುಬರುತ್ತದೆಯೇ ಹೊರತಾಗಿ ಕೆನಡ ತನ್ನ ದೇಶ ಎಂಬ ವಿಶಾಲ ಮನೋಭಾವ ಕಾಣುವುದಿಲ್ಲ. ಇವನ ಅಕೇಡಿಯ ಮತ್ತು ಮೆಲ್‍ವಿಲ್ ಐಲೆಂಡ್ ಎಂಬ ಕವನಗಳು ಇದಕ್ಕೆ ಸಾಕ್ಷಿಯಾಗಿವೆ ರಾಷ್ಟ್ರಪ್ರೇಮಕ್ಕಿಂತ ಪ್ರಾದೇಶಿಕ ಸ್ವಾಭಿಮಾನ ಇವನಲ್ಲಿ ತೀವ್ರವಾಗಿದ್ದ ಕಾರಣ ಈತ ಸಂಯುಕ್ತ ಕೆನಡದ ರಚನೆಗೆ ಹೃತ್ಪೂರ್ವಕವಾದ ಬೆಂಬಲ ಕೊಡಲಿಲ್ಲ. ಈತ ಲಾರ್ಡ್ ಜಾನ್ ರಸೆಲ್‍ಗೆ ಬರೆದಿರುವ ಪತ್ರಗಳು ಇವನ ಸ್ವಾಭಿಮಾನ ಮತ್ತು ಸ್ವತಂತ್ರ ಮನೋವೃತ್ತಿಯನ್ನು ಸಾರುತ್ತವೆ. ಇವನ ಸಂಪಾದಕತ್ವದಲ್ಲಿ ನೋವಸ್ಕೋಷಿಯ ಹೊಸ ಬರೆಹಗಾರರಿಗೆ ಉತ್ತೇಜನ ಕೊಟ್ಟಿತು. ಎಷ್ಟಾದರೂ ಮೊದಲಿಗೆ ಇಂಗ್ಲಿಷ್ ಮತ್ತು ಫ್ರೆಂಚ್ ಕೆನಡಗಳಲ್ಲಿ ಪ್ರಾಂತ್ಯಾಭಿಮಾನವೇ ಅತಿಯಾಗಿದ್ದರಿಂದ 1867ರ ಕಾನ್‍ಫೆಡರೇಷನ್ ತನಕ ಒಂದು ಸಮಗ್ರ ರಾಷ್ಟ್ರೀಯ ಸಾಹಿತ್ಯವಾಗಲೀ ರಾಷ್ಟ್ರಾಭಿಮಾನ ಮೂಡಿಸುವ ಬರೆವಣಿಗೆಯಾಗಲೀ ಕೆನಡದ್ದೇ ಆದ ಸಂಸ್ಕøತಿಯಾಗಲೀ ರೂಪಗೊಂಡಿರಲಿಲ್ಲ. ರಾಷ್ಟ್ರೀಯ ಸಾಹಿತ್ಯ, ಸಂಸ್ಕøತಿ ಅಸ್ತಿತ್ವಕ್ಕೆ ಬರಬೇಕಾದರೆ ಕೆಲವು ತಲೆಮಾರುಗಳು ಕಳೆಯಬೇಕಾಯಿತು.

ಒಂದನೆಯ ಮಹಾಯುದ್ಧದ ಅನಂತರ ಕೆನಡಕ್ಕೆ ಬಂದ ಬ್ರಿಟಿಷ್ ವಲಸೆಗಾರರಲ್ಲಿ ಸುಸನ್ನ ಮೂಡಿ ಮತ್ತು ಕ್ಯಾಥರಿನ್ ಪಾರ್ ಟ್ರೀಲ್ ಸೋದರಿಯರು ಮುಖ್ಯರು. ಮೂಡಿಯ ರಫಿಂಗ್ ಇಟ್ ಇನ್ ದಿ ಬುಷ್ ಮತ್ತು ಟ್ರೇಲಳ ದಿ ಬ್ಯಾಕ್‍ವುಡ್ಸ್ ಆಫ್ ಕೆನಡ-ಇವು ಪ್ರಥಮವಾಗಿ ವಸಾಹತುಗಳ ಸ್ಥಾಪನೆಯ ಹೋರಾಟ ಕುರಿತ ಶ್ರೇಷ್ಠ ಕೃತಿಗಳು. ಇದೇ ಕಾಲಕ್ಕೆ ಸೇರಿದ ಇಬ್ಬರು ಕವಿಶ್ರೇಷ್ಠರಲ್ಲಿ ಚಾಲ್ರ್ಸ ಸ್ಯಾಂಗ್ಸ್ಟರ್ ಕೆನಡದ ಪ್ರಕೃತಿ ಸೌಂದರ್ಯ, ಭೂದೃಶ್ಯ ಹಾಗೂ ದೇಶಭಕ್ತಿ ಕವನಗಳನ್ನು ರಚಿಸಿ ಕೆನಡದ ಮೊದಲ ಗಂಭೀರ ಪದ್ಯಕಾರ ಎಂಬ ಹೆಸರು ಪಡೆದಿದ್ದಾನೆ. ರಾಷ್ಟ್ರಮನೋಭಾವವುಳ್ಳ ಈ ಕವಿ ಒಂದು ಕಾಲಕ್ಕೆ ಕೆನಡದ ರಾಜಕವಿ ಎಂದು ಪ್ರಖ್ಯಾತನಾಗಿದ್ದ. ಕಾನ್ ಫೆಡರೇಷನ್‍ಗೆ ಮುಂಚೆ ಬರುವ ಮತ್ತೊಬ್ಬ ಪ್ರಖ್ಯಾತ ಹಾಗೂ ಪ್ರಥಮ ರಾಷ್ಟ್ರೀಯ ಐತಿಹಾಸಿಕ ಕಾದಂಬರಿಕಾರ ಮೇಜರ್ ಜಾನ್ ರಿಚರ್ಡ್‍ಸನ್. ಈತನ ಗಡಿನಾಡಿನ ವೀರಕಥೆ ವೆಕೂಸ್ಟ ಎಂಬುದು ಪಾಂಟಿಯಾಕನ ಪಿತೂರಿಯನ್ನು ಕುರಿತ ಒಂದು ಭಾವಾತಿರೇಕದ ಕಾದಂಬರಿ. ಈಗಲೂ ಇದರ ಪ್ರಸಿದ್ಧಿ ಕಡಿಮೆಯಾಗಿಲ್ಲ. ವಿಲಿಯಂ ಕರ್ಬಿಯ ಇನ್ನೊಂದು ಐತಿಹಾಸಿಕ ವೀರಕಥೆ ದಿ ಗೋಲ್ಡನ್ ಡಾಗ್ ಅತ್ಯಂತ ಜನಪ್ರಿಯ ಕಾದಂಬರಿ. ಗಿಲ್ಬರ್ಟ್ ಪಾರ್ಕರ್ ಮತ್ತು ಥಾಮಸ್ ರೆಡಾಲ್ ಈ ಕಾಲಾವಧಿಯ ಇನ್ನಿಬ್ಬರು ಕಾದಂಬರಿಕಾರರು.

1867ರಲ್ಲಿ ಕೆನಡ ಸಂಯುಕ್ತ ರಾಷ್ಟ್ರವಾದ ಅನಂತರ ರಾಷ್ಟ್ರಾಭಿಮಾನ ಹೆಚ್ಚಿದಂತೆ ರಾಷ್ಟ್ರೀಯ ಸಾಹಿತ್ಯಪ್ರಜ್ಞೆ ಗರಿಗಟ್ಟಿತು. ಅಪ್ಪಟ ಕೆನಡ ಸಾಹಿತ್ಯಕ್ಕೆ ಬೇಡಿಕೆಯೂ ಹೆಚ್ಚಿತು. ದಿ ಕೆನಡಿಯನ್ ಮಂತ್ಲಿ, ದಿ ಲಿಟರರಿ ಗಾರ್ಲೆಂಡ್, ದಿ ನೇಷನ್, ದಿ ವೀಕ್-ಈ ನಿಯತಕಾಲಿಕಗಳು ಕೆನಡಿಯನ್ನರ ರಾಜಕೀಯ ಸಾಂಸ್ಕøತಿಕ ಸಾಮಾಜಿಕ ಹಾಗೂ ಸಾಹಿತ್ಯ ವಿಚಾರಗಳ ಮಟ್ಟವನ್ನು ಹೆಚ್ಚಿಸಿದುವು. ಇವುಗಳ ಮೂಲಕ ಹಲವಾರು ಬರೆಹಗಾರರು ಬೆಳಕಿಗೆ ಬಂದರು. ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಬಿರುಸಿನ ಚಟುವಟಿಕೆ ಕಂಡುಬಂತು. 1880ರ ದಶಕದಲ್ಲಿ ನಿಜವಾದ ರಾಷ್ಟ್ರೀಯ ಸಾಹಿತ್ಯ ಚಳವಳಿಯ ನವೋದಯವಾಯಿತು. ಕೆನಡ ಸಾಹಿತ್ಯದ ಸುವರ್ಣಯುಗ ಅತ್ಯಂತ ದೊಡ್ಡ ಕವಿ ಚಾಲ್ರ್ಸ್ ಜಿ.ಡಿ.ರಾಬಟ್ರ್ಸ್‍ನಿಂದ ಆರಂಭವಾಯಿತು. ಇಂಗ್ಲಿಷ್-ಕೆನಡಿಯನ್ನರ ಮೇಲೆ ಅತ್ಯಂತ ಆಳವಾದ ಪ್ರಭಾವ ಬೀರಿದ ಕವಿ ಈತ. ಪ್ರಾದೇಶಿಕ ಕವಿಯಾದರೂ 19ನೆಯ ಶತಮಾನಾಂತ್ಯದ ಜನರಲ್ಲಿ ರಾಷ್ಟ್ರಾಭ್ಯುದಯದ ಬಗ್ಗೆ ಇದ್ದ ಆಶೋತ್ತರಗಳು ಈತನ ಕಾವ್ಯದಲ್ಲಿ ಅಭಿವ್ಯಕ್ತವಾಗಿವೆ. ವಿಕ್ಟೋರಿಯನ್ ಕಾವ್ಯ ಸಂಪ್ರದಾಯದಲ್ಲಿ ಮುಳುಗಿರುವ ಒರೈಯನ್ ಅಂಡ್ ಅದರ್ ಪೊಯೆಮ್ಸ್ ಎಂಬ ಕಾವ್ಯಸಂಗ್ರಹದಲ್ಲಿ ರಾಷ್ಟ್ರೈಕ್ಯ ಹಾಗೂ ಅದರ ಹಾದಿಯಲ್ಲಿ ಬರುವ ಎಡರು ತೊಡರುಗಳನ್ನು ಕುರಿತ ಕವನಗಳಿವೆ. ಈತನಿಗೆ ಅತ್ಯಂತ ಅದ್ಭುತ ಯಶಸ್ಸು ತಂದು ಕೊಟ್ಟ ಕವನ ಕೃತಿ ದಿ ಸಾಂಗ್ಸ್ ಆಫ್ ದಿ ಕಾಮನ್ ಡೇ. ಸ್ಪಷ್ಟತೆ, ವಾಸ್ತವಿಕತೆ, ಸರಳತೆ ಹಾಗೂ ಸ್ವಕೀಯತೆ ಈ ಪ್ರಾದೇಶಿಕ ಕವನಗಳ ವೈಶಿಷ್ಟ್ಯ. ಸಾಕಷ್ಟು ಕಾವ್ಯ ಪ್ರತಿಭೆ, ಕಾವ್ಯ ಕೌಶಲ ಪ್ರದರ್ಶಿಸಿರುವ ಈತ ಕೆನಡಿಯನ್ ಪುನರುಜ್ಜೀವನ ಕಾಲದ ನೇತಾರ ಎಂದು ಹೆಸರುಗಳಿಸಿದ್ದಾನೆ. ರಾಬಟ್ರ್ಸ್‍ನ ಪಂಥಕ್ಕೆ ಸೇರಿದ ಆರ್ಕಿಬಾಲ್ಡ್ ಲ್ಯಾಂಪ್‍ಮನ್, ಬ್ಲಿಸ್ ಕಾರ್ಮನ್ ಮತ್ತು ಡಂಕನ್ ಕ್ಯಾಂಪ್‍ಬೆಲ್ ಸ್ಕಾಟ್-ಇವರು ಮೊಟ್ಟಮೊದಲಿಗೆ ಇಂಗ್ಲಿಷ್ ಮಾತನಾಡುವ ದೇಶಗಳ ಗಮನ ಸೆಳೆದರು. ಬಹಳ ಪ್ರಸಿದ್ಧನಾದ ಬ್ಲಿಸ್ ಕಾರ್ಮನ್ ಕವಿ ಸ್ಯಾಪೊ, ಸಾಂಗ್ಸ್ ಆಫ್ ದಿ ಸೀ ಚಿಲ್ಡ್ರನ್ ಮತ್ತು ಪೈಪ್ಸ್ ಆಫ್ ಪ್ಯಾನ್ ಎಂಬ ಕವನ ಸಂಗ್ರಹಗಳಲ್ಲಿ ವಿಸ್ಮಯಕಾರಿಯಾದ ಒಂದು ಮಾಂತ್ರಿಕ ಶಕ್ತಿಯನ್ನು ಸೃಷ್ಟಿಸಿ ಓದುಗರನ್ನು ಅಚ್ಚರಿಗೊಳಿಸಿದ್ದಾನೆ. ಇವನ ಪ್ರಕೃತಿ ಮತ್ತು ಭೂದೃಶ್ಯಕವನಗಳಲ್ಲಿ ಕಂಡುಬರುವ ಕಾವ್ಯ ಮಾಧುರ್ಯ ಎಂದೆಂದಿಗೂ ಮರೆಯುವಂಥದ್ದಲ್ಲ. ಕೆನಡದ ಹೆಸರಾಂತ ವರ್ಣನಾತ್ಮಕ ಕವಿ ಲ್ಯಾಂಪ್‍ಮನ್ ತನ್ನ ಹೀಟ್ ಅಂಡ್ ವಿಂಟರ್ ಈವ್ನಿಂಗ್ ಮತ್ತು ಇತರ ಕವನಗಳಲ್ಲಿ ಸ್ವಚ್ಛವರ್ಣನಾಶಕ್ತಿಯನ್ನು ತೋರಿಸಿಕೊಂಡಿದ್ದಾನೆ. ಈತ ಆಂಟೇರಿಯೊ ಪ್ರಾಂತ್ಯದ ಒಬ್ಬ ಗ್ರಾಮೀಣ ಕವಿ. ಸ್ಥಳೀಯರಾದ ಕೆನಡಿಯನ್ ಇಂಡಿಯನ್ನರ ಸರಳ ಜೀವನವನ್ನು ಕುರಿತು ಬರೆದ ಮೊದಲನೆಯ ಕವಿ ಡಿ.ಸಿ.ಸ್ಕಾಟ್. ದಿ ಫರ್ಸೇಕನ್, ಮಿಷನ್ ಆಫ್ ದ ಟ್ರೀಸ್, ಮತ್ತು ನೈಟ್ ಬರಿಯಲ್ ಇನ್ ದಿ ಫಾರೆಸ್ಟ್ ಮುಂತಾದ ಕವನಗಳು ಕವಿಗೆ ಅವರ ಬಗ್ಗೆ ಇರುವ ಅನುಕಂಪ ವ್ಯಕ್ತಪಡಿಸುವುದರ ಜೊತೆಗೆ ಓದುಗರಲ್ಲಿ ಜೀವನದ ದುರಂತ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಈತನಿಗೆ ದ್ವಿಸಾಂಸ್ಕøತಿಕ ಪ್ರಜ್ಞೆ ಇತ್ತೆಂಬುದಕ್ಕೆ ಈತ ಫ್ರೆಂಚ್-ಕೆನಡಿಯನ್ನರ ಬಗ್ಗೆ ಬರೆದಿರುವ ದಿ ವಿಲೇಜ್ ಆಫ್ ವೈಗರ್ ಮತ್ತು ದಿ ವಿಚಿಂಗ್ ಆಫ್ ಇಲ್‍ಸ್ಟ್ರೀ ಎಂಬ ಕತೆಗಳು ನಿದರ್ಶನಗಳಾಗಿವೆ.

ಕೆನಡದ ಸಾಹಿತ್ಯ ಸುಗ್ಗಿ ಇಪ್ಪತ್ತನೆಯ ಶತಮಾನದ ಆದಿಭಾಗದಿಂದ ಪ್ರಾರಂಭವಾಯಿತು. ಓದುಗರಿಗಿಂತ ಲೇಖಕರೇ ಹೆಚ್ಚಾದರು. ಬರೆವಣಿಗೆಯನ್ನೇ ವೃತ್ತಿಯಾಗಿಟ್ಟುಕೊಂಡ ಮಾರ್ಲೆ ಕಲಗನ್, ಮೇಜೋó ಡ ಲ ರೋಶ್ ಮತ್ತು ಈಥೆಲ್ ವಿಲ್ಸನ್-ಇವರು ಇಂಗ್ಲಿಷ್ ಮತ್ತು ಅಮೆರಿಕನ್ ಪ್ರಕಾಶಕರನ್ನು ಹಿಡಿಯಬೇಕಾಯಿತು. ಆದರೂ ಸಾಹಿತ್ಯೋತ್ಪತ್ತಿ ತಡೆಯಿಲ್ಲದೆ ಸಾಗಿತು. ನೆಲಿ ಮ್ಯಾಕ್‍ಲಿಂಗ್, ಆರ್ಥರ್ ಸ್ಟ್ರಿಂಗರ್, ರಾಲ್ಫ್ ಕೊನರ್-ಇವರು ಪೈರಿ ಪ್ರಾಂತ್ಯಗಳನ್ನು ಕೆನಡದವರಿಗೆ ಪರಿಚಯ ಮಾಡಿಕೊಟ್ಟರು. ಜಾನಪದಗೀತೆಗಳು ಮತ್ತು ಗಡಿನಾಡಿನ ಕಥೆಗಳು ಅತ್ಯಂತ ಜನಪ್ರಿಯವಾದ ಮಾದರಿಗಳಾದುವು. ರಾಲ್ಫ್ ಕೊನರ್‍ನ ರೊಮಾನ್ಸಸ್ ಮತ್ತು ರಾಬರ್ಟ್ ಸರ್ವಿಸ್‍ನ ಯೂಕೋನ್ ಬ್ಯಾಲಡ್ಸ್‍ಗಳ ಲಕ್ಷಾಂತರ ಪ್ರತಿಗಳು ಮಾರಾಟವಾದುವು. ಟಾಮ್ ಮ್ಯಾಕಿನೀಸ್, ಮರ್ಜೊರಿ ಪಿಕ್ಟಾಲ್, ಡಬ್ಲ್ಯೂ.ಎಚ್.ಡ್ರಮಂಡ್, ಲ್ಯೂಸಿ ಎಂ. ಮಾಂಟಗೋಮರಿ-ಇವರು ಇದೇ ಕಾಲದ ಮುಖ್ಯ ಕವಿಗಳು. 1930ರಲ್ಲಿ ಮಾಂಟ್ರಯಾಲ್ ಗುಂಪಿನ ಕವಿಗಳಾದ ಇ.ಜೆ.ಪ್ರಾಟ್, ಎಫ್.ಆರ್.ಸ್ಕಾಟ್, ಎ.ಜೆ.ಎಂ.ಸ್ಮಿತ್ ಮತ್ತು ಲಿಯೊ ಕೆನಡಿ-ಇವರ ಆಗಮನದಿಂದ ಇಂಗ್ಲಿಷ್-ಕೆನೆಡಿಯನ್ ಕಾವ್ಯ ಗಣನೀಯ ಪ್ರಗತಿ ಸಾಧಿಸಿತು. ಕೆನಡದ ಪಶ್ಚಿಮ ಭಾಗವನ್ನು ಪ್ರತಿಭಾವಂತ ಕಾದಂಬರಿಕಾರ ಫ್ರೆಡ್ರಿಕ್ ಫಿಲಿಪ್ ಗ್ರೂವ್ ವಾಸ್ತವಿಕತೆಯಿಂದ ವರ್ಣಿಸಿದ್ದಾನೆ. ಮಾರ್ಥಾ ಆಸ್ಟೆನ್ಸೊ. ರಾಬರ್ಟ ಸ್ಟೆಡ್, ಫ್ರೆಡ್ರಿಕ್ ನಿವೆನ್, ಸಿಂಕ್ಲೇರ್, ರಾಸ್ ಡಬ್ಲ್ಯೂ. ಒ.ಮಿಟ್ಟೆಲ್, 

ಇ.ಎ.ಮ್ಯಾಕ್‍ಕೋರ್ಟ್-ಇವರು ಈ ಪ್ರೈರಿ ಪಂಥಕ್ಕೆ ಸೇರಿದ ಇತರ ಮುಖ್ಯ ಕಾದಂಬರಿಕಾರರು. ಈಥೆಲ್ ವಿಲ್ಸನ್ನಳ ಈಕ್ವೇಷನ್ಸ್ ಆಫ್ ಲವ್, ಗೇಬ್ರಿಯಲ್ ರಾಯಳ ದಿ ಕ್ಯಾಷಿಯರ್ ಮತ್ತು ಥಾಮಸ್ ರೆಡಾಲ್‍ನ ದಿ ನಿಂಫ್ ಅಂಡ್ ದಿ ಲ್ಯಾಂಪ್-ಇವು ಪ್ರಾದೇಶಿಕ ಕಾದಂಬರಿಗಳಾದರೂ ತಮ್ಮ ಸಾಂಕೇತಿಕತೆ ಹಾಗೂ ಕಾಲ್ಪನಿಕತೆಯ ದರ್ಶನ ಬಲದಿಂದ ಪ್ರಾದೇಶಿಕತೆಯನ್ನು ಮೀರಿ ಹೋಗಿವೆಯಲ್ಲದೆ ರಾಷ್ಟ್ರೀಯ ಸಾಹಿತ್ಯಸೃಷ್ಟಿಗೆ ನಾಂದಿಯಾಗಿವೆ. ಇಂಗ್ಲಿಷ್ ಮತ್ತು ಫ್ರೆಂಚ್ ಸಾಹಿತ್ಯವೆಂಬ ವಿಭಿನ್ನತೆ ಕ್ರಮೇಣವಾಗಿ ಕಡಿಮೆಯಾಗುತ್ತ ಬಂತು. ದ್ವಿಸಾಂಸ್ಕøತಿಕ ಪ್ರಜ್ಞೆಯುಳ್ಳ ಲೆಮ್‍ಲಿನ್ ತನ್ನ ಲೆಪ್ಲೂಫೆ ಕಾದಂಬರಿಯಲ್ಲಿ ಏಕಕಾಲದಲ್ಲಿ ಫ್ರೆಂಚ್ ಮತ್ತು ಇಂಗ್ಲಿಷ್ ಸಾಹಿತಿಯ ದೃಷ್ಟಿಕೋನದಿಂದ ಪಾತ್ರಗಳನ್ನು ಸೃಷ್ಟಿಸಿ ರಾಷ್ಟ್ರದ ಭಾವೈಕ್ಯತೆಗೆ ಹಾದಿ ತೋರಿಸಿದ್ದಾನೆ. ಹ್ಯೂ ಮ್ಯಾಕ್ಲೆನಾನ್ ಸಹ ತನ್ನ ಟೂ ಸಾಲಿಟ್ಯೂಡ್ಸ್‍ನಲ್ಲಿ ಇಂಗ್ಲಿಷ್ ಮತ್ತು ಫ್ರೆಂಚರ ನಡುವೆ ಇರುವ ತುಯ್ತ, ಪ್ರಾಂತೀಯತೆ ಮತ್ತು ರಾಷ್ಟ್ರೀಯತೆಗಳ ಅನಿಶ್ಚಿತ ಹೊಯ್ದಾಟಗಳನ್ನು ಪ್ರತಿಬಿಂಬಿಸಿದ್ದಾನೆ. ಫ್ರೆಂಚ್-ಇಂಗ್ಲಿಷ್ ಸಂಸ್ಕøತಿ ಮತ್ತು ಸಾಹಿತ್ಯಗಳ ನಡುವಿನ ಭಿನ್ನತೆ ಕಡಿಮೆಯಾಗಿ ಒಂದು ಸಮಗ್ರವಾದ ರಾಷ್ಟ್ರೀಯತೆ ಏರ್ಪಡಬೇಕೆಂಬ ಹೆಬ್ಬಯಕೆಯ ವ್ಯಂಗ್ಯಾತ್ಮಕ ದ್ವಂದ್ವವನ್ನು ಪ್ರಸಿದ್ಧ ಕಾದಂಬರಿಕಾರ ಮಾರ್ಲೆ ಕಲಗನ್ ತನ್ನ ಸ್ಮರಣಯೋಗ್ಯ ಕಾದಂಬರಿಗಳಾದ ಸಚ್ ಈಸ್ó ಮೈ ಬಿಲವೆಡ್, ದೆ ಷಲ್ ಇನ್‍ಹೆರಿಟ್ ದಿ ಅರ್ತ್, ಮೋರ್ ಜಾಯ್ ಇನ್ ಹೆವನ್, ದಿ ಲವ್ಡ್ ಅಂಡ್ ದಿ ಲಾಸ್ಟ್‍ಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಇದೇ ವ್ಯಂಗ್ಯ ವಿಧಾನವನ್ನು ಅನುಸರಿಸಿದ ಫ್ರೆಂಚ್-ಕೆನಡಿಯನ್ ಕಾದಂಬರಿಗಾರ್ತಿ ಗೇಬ್ರಿಯಲ್ ರಾಯ್ ತನ್ನ ದಿ ಕ್ಯಾಷಿಯರ್, ವೇರ್ ನೆಸ್ಟ್ಸ್ ದಿ ವಾಟರ್ ಹೆನ್ ಕಾದಂಬರಿಗಳಲ್ಲಿ ರಾಷ್ಟ್ರೀಯ ಲಕ್ಷಣಗಳುಳ್ಳ ಪಾತ್ರಸೃಷ್ಟಿಯ ಮೂಲಕ ಎರಡು ಸಂಸ್ಕøತಿಗಳನ್ನೂ ಬೆಸೆಯುವ ಪ್ರಯತ್ನ ಮಾಡಿದ್ದಾಳೆ.

ಯೂರೋಪಿನ ವಿವಿಧ ದೇಶಗಳಿಂದ ವಲಸೆಬಂದ ಕೆಲವು ಬರೆಹಗಾರರು ಕೆನಡದ ಸಾಹಿತ್ಯ ಸಂಪತ್ತು ಹಾಗೂ ವೈವಿಧ್ಯವನ್ನು ಹೆಚ್ಚಿಸಿದ್ದಾರೆ. ಇಪ್ಪತ್ತನೆ ಶತಮಾನದ ಉತ್ತರಾರ್ಧದ ಕೆಲವು ಕಾದಂಬರಿಕಾರರನ್ನು ಈಗ ಹೆಸರಿಸಬಹುದು. ಫಿಲಿಪ್ ಚೈಲ್ಡ್ (ದಿ ವಿಲೇಜ್ ಆಫ್ ಕ್ರಿಸೆಲ್ (ದಿ ಡೇಸ್ ಆಫ್ ರಾತ್), ಹ್ಯೂ ಗಾರ್ನರ್ (ಸ್ಟಾರಮ್ ಬಿಲೊ), ಹೆನ್ರಿ ಕ್ರಿಸೆಲ್ (ದಿ ರಿಚ್ ಮ್ಯಾನ್), ರಾಬರ್ಟ್‍ಸನ್ ಡೇವಿಸ್ (ಲೀವ್ಸ್ ಆಫ್ ಮ್ಯಾಲಿಸ್). ಡೆವಿಡ್ ವಾಕರ್ ಬ್ರಿಯಾನ್ ಮೂರ್, ನಿಕೊಲಾಸ್ ಮಾನ್‍ಸೆರಾಟ್-ಇವರು ಬ್ರಿಟಿಷ್ ದ್ವೀಪಗಳಿಂದ ಬಂದ ಇತ್ತೀಚಿನ ಕಾದಂಬರಿಕಾರರು.

ಇಪ್ಪತ್ತನೆಯ ಶತಮಾನದಲ್ಲಿ ಕಾವ್ಯವೂ ವಿಪುಲವಾಗಿ ಬೆಳೆದಿದೆ. ವಿಲ್ಸನ್ ಮ್ಯಾಕ್‍ಡೊನಾಲ್ಡ್ ಹತ್ತೊಂಬತ್ತನೆಯ ಶತಮಾನದ ರಮ್ಯ ಕಾವ್ಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾನೆ. ಇವನ ಬಹಳ ಮುಖ್ಯ ಕಾವ್ಯಕೃತಿ ಔಟ್ ಆಫ್ ದಿ ವಿಲ್ಡರ್ನೆಸ್. ಈ ಶತಮಾನದ ಅತ್ಯಂತ ದೊಡ್ಡ ಕವಿ ನಿಸ್ಸಂದೇಹವಾಗಿಯೂ ಎಡ್ವಿನ್ ಜಾನ್ ಪ್ರಾಟ್. ಸಮುದ್ರ, ನೀರ್ಗಲ್ಲಿನ ಗುಡ್ಡ, ಭಯಂಕರ ಪ್ರಾಣಿಗಳು ಮತ್ತು ಇತರ ಮನುಷ್ಯೇತರ ವಸ್ತುಗಳ ಬಗ್ಗೆ ಕಾವ್ಯಚಿತ್ತವೃತ್ತಿಯುಳ್ಳ ಈತ ಇವುಗಳ ನಿರೂಪಣೆಯಲ್ಲಿ ತನ್ನದೇ ಆದ ಒಂದು ಸ್ವಕೀಯತೆಯನ್ನು ತೋರಿಸಿಕೊಂಡಿದ್ದಾನೆ. ಈತನ ದಿ ವಿಚಸ್ ಬ್ರ್ಯೂ, ದಿ ಟೈಟಾನ್ಸ್ ಎಂಬ ಕಾವ್ಯಕೃತಿಗಳು ಮನುಷ್ಯೇತರ ವಸ್ತುಗಳ ಬಗ್ಗೆ ಆದಿಕಾಲದ, ಇತಿಹಾಸಪೂರ್ವದ ಮನೋಭಾವವನ್ನೊಳಗೊಂಡಿವೆ. ಪ್ರಕೃತಿಯ ಪ್ರಕೋಪಗಳಿಗೆ ಮಾನವ ಹೇಗೆ ತುತ್ತಾಗುತ್ತಾನೆಂಬುದರ ವರ್ಣನೆ ಇಲ್ಲಿದೆ. ಬ್ರೆ ಬೂಫ್ ಅಂಡ್ ಹಿಸ್ ಬ್ರದ್ರನ್ ಎಂಬ ಕಾವ್ಯದಲ್ಲಿ ಬ್ರೆಬೂಫ್ ತನ್ನ ಆತ್ಮಬಲಿಯಿಂದ ಮಾನವ ಪ್ರಕೃತಿಯನ್ನು ಜಯಿಸಿದ ರೀತಿಯ ವರ್ಣನೆ ಇದೆ. ಟುವಡ್ರ್ಸ್ ದಿ ಲಾಸ್ಟ್ ಸ್ಪೈಕ್ ಎಂಬ ಕಾವ್ಯ ಸಂಕಲನದಲ್ಲಿ ಅಂತರ ಖಂಡೀಯ ಬೃಹತ್ ರೈಲ್ವೆ ನಿರ್ಮಾಣದಲ್ಲಿ ಮನುಷ್ಯೇತರ ಶಕ್ತಿಯ ಮೇಲೆ ಮಾನವ ತೋರುವ ಅಸಾಧಾರಣ ಯಶಸ್ಸಿನ ಸಾಧನೆಯ ವರ್ಣನೆ ಇದೆ. ಈ ಶತಮಾನದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ ವೈಯಕ್ತಿಕ ಕೀರ್ತಿ ಪ್ರ್ಯಾಟ್‍ಗೆ ಸೇರಿದ್ದು.

1930ರಲ್ಲಿ ಒಂದು ಹೊಸ ಹಾಗೂ ಸತ್ತ್ವಪೂರ್ಣ ಕಾವ್ಯ ಚಳವಳಿ ಪ್ರಾರಂಭವಾಯಿತು. ರಾಬಟ್ರ್ಸ್‍ನ ರೊಮ್ಯಾಂಟಿಕ್ ಪಂಥದ ವಿರುದ್ಧ ಹೋರಾಡುವುದೇ ಇದರ ;ಉದ್ದೇಶ. ಈ ಚಳವಳಿಯ ಮುಖಂಡ ಯಹೂದಿ ವಂಶಸ್ಥನಾದ ಏಬ್ರಹಾಂ ಎಮ್. ಕ್ಲೇನ್ ತಾಲ್ಮೂಡಿಕ್ ಪಂಡಿತ ಹಾಗೂ ದೊಡ್ಡ ವಿದ್ವಾಂಸ. ಪುರಾಣ ಕಥೆ, ಸಾಂಪ್ರದಾಯಿಕ ನುಡಿಗಟ್ಟು ಮತ್ತು ಪುರಾತನ ಉಪಾಸನಾ ಕ್ರಮಗಳನ್ನೊಳಗೊಂಡ ಕಾವ್ಯಸೃಷ್ಟಿಯಲ್ಲಿ ಅಗ್ರಗಣ್ಯ. ಎ.ಜೆ.ಎಮ್.ಸ್ಮಿತ್ತನ ದಿ ಬುಕ್ ಆಫ್ ಕೆನಡಿಯನ್ ಪೊಎಟ್ರಿ ಇತ್ತೀಚೆಗೆ ವಿಪುಲವಾಗಿ ಹೊರಬರುತ್ತಿರುವ ನವ್ಯ ಪಂಥಕ್ಕೆ ಸೇರಿದ ಕವನಗಳ ಸಂಗ್ರಹ. ಈ ಹೊಸ ಕಾವ್ಯ ಪಂಥಕ್ಕೆ ಸೇರಿದ ಇನ್ನೊಬ್ಬ ಯಹೂದಿ ವಂಶಸ್ಥನಾದ ಅರ್ವಿಂಗ್ ಲೇಟನ್ ಹಾಗೂ ಪೋಲಿಷ್ ವಲಸೆಗಾರ ಡ್ಯೂಡೆಕ್ ಈ ಚಳವಳಿಗೆ ಚೈತನ್ಯ ಪ್ರಾಯರಾಗಿರುವರಲ್ಲದೆ ತನ್ಮೂಲಕ ಫ್ರೆಂಚ್ ಮತ್ತು ಇಂಗ್ಲಿಷ್ ಸಾಹಿತ್ಯವೆಂಬ ತಾರತಮ್ಯವನ್ನು ಸಂಪೂರ್ಣವಾಗಿ ಹೋಗಲಾಡಿಸಿ ಕೆನಡತನವನ್ನೊಳಗೊಂಡ ಹೊಸ ಸಾಹಿತ್ಯ ಸೃಷ್ಟಿಗೆ ಮಾರ್ಗದರ್ಶಕರಾಗಿದ್ದಾರೆ.

ಆಧುನಿಕ ಕೆನಡದ ಅತಿದೊಡ್ಡ ಪ್ರಬಂಧಕಾರ ಮಾಂಟ್ರಿಯಾಲ್‍ನ ಮ್ಯಾಕ್‍ಗಿಲ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದ ಸ್ಟೀವನ್ ಲೀಕಾಕ್. ಈತ ಕೆನಡ ಮಾದರಿಯ ವ್ಯಂಗ್ಯ ಸಾಹಿತ್ಯದ ಸೃಷ್ಟಿಕರ್ತ. ಸಾಮಾಜಿಕ ನ್ಯೂನತೆಗಳನ್ನು ವಿನೋದಾತ್ಮಕ ಪ್ರಬಂಧಗಳಲ್ಲಿ ಎತ್ತಿ ತೋರಿಸಿದ್ದಾನೆ. ಈತನ ಲಿಟರರಿ ಲ್ಯಾಪ್ಸಸ್ ಮತ್ತು ಸನ್‍ಷೈನ್ ಸ್ಕೆಚಸ್ ಆಫ್ ಎ ಲಿಟ್ಲ್ ಟೌನ್ ಎಂಬ ಗ್ರಂಥಗಳು ಈತ ಒಬ್ಬ ಜಗದ್ವಖ್ಯಾತ ವಿನೋದಕಾರನೆಂದು ಸ್ಥಿರಪಡಿಸುತ್ತವೆ. ಟಿ.ಸಿ. ಹ್ಯಾಲಿ ಬರ್ಟನ್ನನ ಅನಂತರ ಓದುಗರಲ್ಲಿ ನಗೆಯ ಹೊಳೆಯನ್ನೇ ಹರಿಸಿದವ ಲೀಕಾಕ್ ಒಬ್ಬನೇ.
(ನೋಡಿ- ಲೀಕಾಕ್,-ಸ್ಟೀವನ್).

ಕೆನಡದ, ಅಷ್ಟೇಕೆ, ಉತ್ತರ ಅಮೆರಿಕದ, ಮೊದಲನೆಯ ಕಾದಂಬರಿ ಫ್ರಾನ್ಸೆಸ್ ಮೂರ್ ಬ್ಯುಕ್ ಎಂಬಾಕೆ ಬರೆದ `ದ ಹಿಸ್ಟರಿ ಆಫ್ ಎಮಿಲ ಮ್ಯಾರಿಟನ್ನು (1769) ಎಂಬ ಕೃತಿ. ಇದು ಪತ್ರಗಳ ರೂಪದಲ್ಲಿರುವ `ರೊಮಾನ್ಸ್ ಕೆನಡದ ಇತಿಹಾಸವನ್ನು ಆಧರಿಸಿದ ಮೊದಲನೆಯ ಕಾದಂಬರಿ ಜಾನ್ ರಿಚರ್ಡ್‍ಸನ್ ಬರೆದ `ವಕೌಸ್ಟ (1832) ಇಬ್ಬರು ಸೋದರಿಯರು ಆತ್ಮವೃತ್ತಗಳಲ್ಲಿ ಕ್ಯಾಥರೀನ್ ಪಾರ್ ಟೈಯ್ಲ್ `ಬ್ಯಾಕ್‍ವುಡ್ಸ್ ಆಫ್ ಕೆನಡಾ (1836) ಎನ್ನುವ ಪುಸ್ತಕದಲ್ಲಿ ಮತ್ತು ಸುಸನ್ನ ಮೂಡಿ `ರಫಿಂಗ ಇಟ್ ಇನ್ ದಿ ಬುಷ್ (1952) ಎನ್ನುವ ಪುಸ್ತಕದಲ್ಲಿ ಇಲ್ಲಿಗೆ ಬಂದ ಪ್ರಾರಂಭದ ಧೀರರ ಕಷ್ಟಗಳನ್ನು ಬಿತ್ತರಿಸಿದರು.
19ನೆಯ ಶತಮಾನದ ಇಬ್ಬರು ಪ್ರಧಾನ ಕಾದಂಬರಿಕಾರರು ವಿಲಿಯಂ ಕರ್ಬಿ ಮತ್ತು ಗಿಲ್ಬರ್ಟ್ ಪಾರ್ಕರ್. ಕರ್ಬಿಯ `ದಿ ಗೋಲ್ಡನ್ ಡಾಗ್ (1877) ಮತ್ತು ಪಾರ್ಕರನ `ದಿ ಸೀಟ್ಸ್ ಆಫ್ ದಿ ಮೈಟಿ (1897) ಗತಕಾಲವನ್ನು ವೈಭವೀಕರಿಸಿದವು. ಇವರನ್ನು ಹಲವರು ಕಾದಂಬರಿಕಾರರು ಅನುಕರಿಸಿದರು. ಈ ಶತಮಾನದ ಕಡೆಯ ವರ್ಷಗಳಲ್ಲಿ ಗ್ರಾಮಜೀವನವನ್ನು ವೈಭವೀಕರಿಸಿದ ರಾಲ್ಫ್ ಕಾನರ್ (ಸಿ.ಡಬ್ಲು, ಗಾರ್ಡನ್‍ನ ಕಾವ್ಯನಾಮ)ನ `ಬ್ಯಾಕ್ ರಾಕ್ (1898) ಮತ್ತು `ದಿ ಮ್ಯಾನ್ ಫ್ರಮ್ ಗ್ಲೆನ್‍ಗರಿ (1901) ಈ ಒಲವನ್ನು ಪ್ರಾರಂಭಿಸಿದವು.

`ಕೆನೆಡಿಯನ್ ಫೋರ್ಮ್ (ಪ್ರಾರಂಭ 1920) ಮತ್ತು `ಮೆರ್‍ಗಿಲ್ಸ್ ಫಾರ್ಟ್‍ನೈಟ್‍ಲಿ ರಿವ್ಯೂ (1925-27) ಈ ಪ್ರಕಟಣೆಗಳು `ಹೊಸ ಕಾವ್ಯದ ಪ್ರಕಟಣೆಗೆ ನೆರವಾದವು. ಈ ಘಟ್ಟದ ಶ್ರೇಷ್ಠ ಕವಿ ಎಡ್ವಿನ್ ಜಾನ್ ಪ್ರಾಟ್ ಇವನ ಸಾಗರಪ್ರೀತಿ. ನಿಸರ್ಗದಲ್ಲಿನ ಕ್ರೌರ್ಯದ ಅರಿವು ಮತ್ತು ಬದುಕಿನ `ಟ್ರಾಜಿಕ್ ದೃಷ್ಟಿ ಇವು ಇವನ ಕಾವ್ಯದಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ.

ಸಮಾಜಶಾಸ್ತ್ರೀಯ ಮನೋಧರ್ಮದ ಕಾದಂಬರಿಯನ್ನು ಪ್ರಾರಂಭಿಸಿದವನು ಫ್ರೆಡರಿಕ್ ಫಿಲಿಪ್ ಗ್ರೋತ್. `ಸೆಟಿರ್ಸ್ ಆಫ್ ದಿ ಮಾರ್ಷ್ (1925) ಮತ್ತು `ಫ್ಯೂಟ್ಸ್ ಆಫ್ ದಿ ಅರ್ತ್ (1933) ಕಾದಂಬರಿಗಳಲ್ಲಿ ಪ್ರಾರಂಭದ ಸಾಹಸಿಗಳ ಬದುಕನ್ನು ಪುನರ್ ಸೃಷ್ಟಿಸಿದ. ಮೇಸೆóೂೀ ಡಲ ರೋಷ್ ಎನ್ನುವ ಕಾದಂಬರಿಕಾರ್ತಿ 16 ಸಂಪುಟಗಳಲ್ಲಿ ವೈಟ್‍ಓಕ್ ಕುಟುಂಬ ಮತ್ತು ಅವರ ತೋಟದ ಕಥೆಯನ್ನು ಬಿತ್ತರಿಸಿದಳು. ಮಾರ್ಲಿ ಕೆಲಿಗಾನ್ ರಚಿಸಿದ `ದೆ ಷಲ್ ಇನ್‍ಹೆರಿಟ್ ದಿ ಅರ್ತ್ (1935) ಮತ್ತು ದಿಲವ್‍ಡ್ ಅಂಡ್ ದಿ ಲಾಸ್ಟ್ (1961) ಕಾದಂಬರಿಗಳೇ ವ್ಯಕ್ತಿ ಸಮಾಜಗಳ ಘರ್ಷಣೆಯನ್ನು ಕಾಣಬಹುದು.
ಒಂದನೆಯ ಶತಮಾನದ ಉತ್ತರಾರ್ಧದಲ್ಲಿ ಅರ್ಲ್ ಬರ್ನೆ ಮತ್ತು ಡರಥಿ ಲೈವ್‍ಸೇ ಪ್ರಮುಖ ಕವಿಗಳು ಬರ್ನೆಯರು `ಹು ಹ್ಯೂಮನಿಸಂ ಸಾರುವ ಕಾವ್ಯ ಲೈವ್‍ಸೇ ಕಾವ್ಯದ ವಸ್ತು ವಿನಾಶಕ ಶಕ್ತಿಗಳೊಡನೆ ವೃತ್ತಿಯ ಹೋರಾಟ. ರೇಮಂಡ್ ಸೂಸ್ಟರ್ ಲೂಯಿ ಡುಡೆಕ್ ಮತ್ತು ಇರ್ವಿಂಗ್ ಟೆಲ್ಟಿನ್ ಕೆನಡ ಸಮಾಜದ ಪ್ರಾಪಂಚಿಕ ಸಂಪತ್ತಿನ ಒಲವಿನ ಮನೋಧರ್ಮವನ್ನು ಟೀಕಿಸಿದರು. ಪೆಟ್ರಿಷಿಯ ಕೆ. ಪೇಜಳಿಗೆ ಮನಸ್ಸಿನ ವ್ಯಾಪಾರದಲ್ಲಿ ಆಸಕ್ತಿ. ಅರ್ನೆಸ್ಟ್ ಬರ್‍ಲರ್ನ `ದಿ ಮೌಂಟನ್ ಅಂಡ್ ದಿ ವಾಲಿ (1952) ನೊವ ಸ್ಕಾಟಿಯದ ಕಲಾವಿದರ ಹತಾಶೆಯನ್ನು ಚಿತ್ರಿಸಿದ ಎಥೆಲ್ ವಿಲ್ಸನ್, `ದಿ ಈಕ್ವೇಷನ್ಸ್ ಆಫ್ ಲವ್ (1952) ಮತ್ತು `ಸ್ಯಾಂಪ್ ಏಂಜೆಲ್ (1954) ಕಾದಂಬರಿಗಳಲ್ಲಿ ಸ್ತ್ರೀಯರು ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಪಡುವ ಪಾಡನ್ನು ಚಿತ್ರಿಸಿದಳು. 1960ರ ಮತ್ತು 1970ರ ದಶಕಗಳ ಪ್ರಮುಖ ಕಾದಂಬರಿಕಾರರು ರಾಬರ್ಟ್‍ಸನ್ ಡೇವಿಸ್ ಮತ್ತು ಮಾರ್ಗರೆಟ್ ಲಾರೆನ್ಸ್. ಡೇವಿಸ್ ಮನೋವಿಜ್ಞಾನಿ ಯುಗನ ಸಿದ್ಧಾಂತಗಳ ಬೆಳಕಿನಲ್ಲಿ ಪಾತ್ರಗಳ ಮನಸ್ಸಿನ ವ್ಯಾಪಾರಗಳನ್ನು ವಿಶ್ಲೇಷಿಸಿದ; ಲಾರೆನ್ಸಳ ಕಾದಂಬರಿಗಳಲ್ಲಿ ಸೂಕ್ಷ್ಮ ಪಾತ್ರ ವಿಶ್ಲೇಷಣೆ ಇದೆ. ಕಳೆದ 25 ವರ್ಷಗಳಲ್ಲಿ ಮೈಕೆಲ್ ಒಂಡಾಟ್‍ಜೆ ಪ್ರಾಮುಖ್ಯತೆಗಳಿಸುತ್ತಿದ್ದಾನೆ, ಇವನ `ದಿ ಇಂಗ್ಲಿಷ್ ಪೇಷೆಂಟ್ ಕಾದಂಬರಿಗೆ (1992) ಬುಕರ್ ಬಹುಮಾನ ಬಂದಿದೆ.
ನಾಟಕದ ಬೆಳವಣಿಗೆ ಬಹಳ ನಿಧಾನವಾಗಿದೆ. ರೆಪರ್ಟರಿ ಥಿಯೇಟರ್‍ಗಳು 20ನೆ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾದವು.

ಸಾಹಿತ್ಯ ವಿಮರ್ಶೆಯಲ್ಲಿ ಖ್ಯಾತರಾದವರು ಜಾರ್ಜ್ ಮಡ್ ಕಾಕ್ ಮತ್ತು ನಾರ್ ತ್ರಾಪ್ ಫ್ರೈ. ಫ್ರೈ ಬರೆದ `ದಿ ಅರ್ನಾಮಿ ಆಫ್ ಕ್ರಿಟಿಸಿಸಂ ಕೆನಡದಾಚೆ ಸಹ ಪ್ರಭಾವ ಬೀರಿತು.					ಪರಿಷ್ಕರಣೆ (ಎಲ್.ಎಸ್.ಎಸ್.)
										
ಫ್ರೆಂಚ್ ಕೆನಡಿಯನ್ ಸಾಹಿತ್ಯ

1763ರಲ್ಲಿ ಫ್ರೆಂಚ್-ಕೆನಡ ಇಂಗ್ಲಿಷರ ಕೈಸೇರಿದ ಪರಿಣಾಮವಾಗಿ ಫ್ರೆಂಚರು ತಮ್ಮ ಸಂಸ್ಕøತಿಯನ್ನು ಇನ್ನೂ ಭದ್ರಪಡಿಸಿಕೊಳ್ಳಲು ಪ್ರಯತ್ನಿಸಿದರು. ಪರಕೀಯರ ಕೈಕೆಳಗಿರಬೇಕಾದ ಪರಿಸ್ಥಿತಿಯಲ್ಲಿ ತಾವು ಹೆಚ್ಚಾಗಿ ನೆಲಸಿದ್ದ ಕ್ವಿಬೆಕ್ ಪ್ರಾಂತ್ಯದ ಬಗ್ಗೆ ಅವರಿಗೆ ಅಭಿಮಾನ ಹೆಚ್ಚಾಯಿತು. ಅಂದರೆ ಹತ್ತೊಂಬತ್ತನೆ ಶತಮಾನದ ಆದಿಭಾಗದಿಂದ ಪ್ರಾರಂಭವಾದ ಫ್ರೆಂಚ್-ಕೆನಡಿಯನ್ ಸಾಹಿತ್ಯವೂ ಅವರ ಸಂಸ್ಕøತಿ ಮತ್ತು ಪ್ರಾಂತ್ಯಾಭಿಮಾನದಿಂದ ಪಡೆದ ಸ್ಫೂರ್ತಿಯ ಫಲವಾಗಿದೆ.

ಫ್ರೆಂಚ್-ಕೆನಡಿಯನ್ ಸಾಹಿತ್ಯಾಭ್ಯುದಯಕ್ಕೆ ಸ್ಫೂರ್ತಿದಾಯಕವಾದ ಗ್ರಂಥ ಎಫ್.ಎಕ್ಸ್.ಗಾರ್ನೂವಿನ ಹಿಸ್ಟರಿ ಆಫ್ ಕೆನಡ. ಇದು ಫ್ರೆಂಚ್-ಕೆನಡಿಯನರಲ್ಲಿ ಸುಪ್ತವಾಗಿದ್ದ ಸಾಂಸ್ಕøತಿಕಾಭಿಮಾನ ಮತ್ತು ರಾಷ್ಟ್ರಾಭಿಮಾನಗಳನ್ನು ಹೊಡೆದೆಬ್ಬಿಸಿತು. ಸಾಹಿತ್ಯ ಚಟುವಟಿಕೆಯಲ್ಲಿ ಚೈತನ್ಯ ಉಂಟುಮಾಡಿತಲ್ಲದೆ, ಸಾಹಿತ್ಯದ ದಾರಿಯನ್ನೂ ರೂಪಿಸಿತು. ಈ ಶತಮಾನದ ಮೊಟ್ಟಮೊದಲ ರಮ್ಯ ಹಾಗೂ ದೇಶಭಕ್ತಿಕವಿ ಕ್ವಿಬೆಕ್‍ನ ಪುಸ್ತಕ ವ್ಯಾಪಾರಿ ಜೋಸೆಫ್ ಆಕ್ಟೇವ್ ಕ್ರಿಮ್ಯಾಜೀ. ಈತ ಮತ್ತು ಈತನ ಸಮಕಾಲೀನರ ಪದ್ಯ, ಗದ್ಯಗಳಲ್ಲಿ ಮೂಲ ದೇಶವಾದ ಫ್ರಾನ್ಸಿನ ವಿಕ್ಟರ್ ಹ್ಯೂಗೊ ಮತ್ತು ಆಲ್ಬಾನ್ಸ್ ಡಿ ಲ್ಯಾಮರ್ಟೈನರ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಕ್ರಿಮ್ಯಾಜೀಯ ಗ್ರಂಥಗಳು ಇಂದಿಗೂ ಜನಪ್ರಿಯವಾಗಿವೆ. ಕ್ರಿಮ್ಯಾಜೀó, ಪಿ.ಒ.ಶಾವೂ, ಆಂಟೋನ್ ಗೆರಿನ್ ಲೆಜೋಯಿ-ಇವರ ಬರೆಹಗಳಲ್ಲಿ ಫ್ರೆಂಚ್-ಕೆನಡ ತನದ ವೈಶಿಷ್ಟ್ಯವನ್ನೂ ಫ್ರೆಂಚ್ ಪದ್ಧತಿ ಹಾಗೂ ಕೆನಡಿಯನ್ ಮನೋಧರ್ಮಗಳ ಸಮ್ಮಿಲನವನ್ನೂ ಕಾಣಬಹುದು. ಕೆನಡದ ಜನಜೀವನ, ಸಂಪ್ರದಾಯ, ಧಾರ್ಮಿಕ ಶ್ರದ್ಧೆಯನ್ನೊಳಗೊಂಡ ಕಾವ್ಯರಚನೆಯಲ್ಲಿ ಪ್ರಸಿದ್ಧರಾದವರು ಕ್ರಮ್ಯಾಜೀóಯ ಅನುಯಾಯಿಗಳಾದ ವಿಲಿಯಂ ಚಾಪ್‍ಮನ್, ಪ್ರ್ಯಾಂಪಿಲ್ ಲಿಮೆ, ಆಲ್ಫ್ರೆಡ್ ಗಾರ್ನೂ ಮತ್ತು ನೆರಿ ಬೀಚೆಮಿನ್. ಇವರು ಕ್ವಿಬೆಕ್ಕಿನ ಪ್ರಾದೇಶಿಕ ಕಾವ್ಯಸಂಪ್ರದಾಯದ ಪೂರ್ವಗಾಮಿಗಳು. ಬ್ಲಾಂಚಿಲ್ಯಾಮಂಟೇನ್, ಆಲ್ಬರ್ಟ್ ಫರ್‍ಲ್ಯಾಂಡ್, ಎಂಗಲ್‍ಬರ್ಟ್ ಗ್ಯಾಲೆಜ್ó ಮತ್ತು ಆಲ್ಫಾನ್ಸ್ ಡಿಎಇಲೆಟ್ಸ್ ಇವರು ಈ ಪಂಥಕ್ಕೆ ಸೇರಿದ ಇತರ ಮುಖ್ಯ ಕವಿಗಳು.

ಈ ಕಾಲಾವಧಿಯ ಸಾಹಿತ್ಯ ಫ್ರೆಂಚ್-ಕೆನಡಿಯನರ ಸಂಸ್ಕøತಿ ಇಂಗ್ಲಿಷ್-ಕೆನಡಿಯನ್ನರ ಸಂಪರ್ಕದಿಂದ ದೂರವಾಗಿರಬೇಕೆಂಬ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇಂಗ್ಲಿಷರು ಮತ್ತು ಫ್ರೆಂಚರು ಅಮೆರಿಕ ಸಂಯುಕ್ತಸಂಸ್ಥಾನಗಳಿಮದ ಪ್ರಬಲವಾಗಿ ಬರುತ್ತಿದ್ದ ಸಾಮಾಜಿಕ, ಸಾಂಸ್ಕøತಿಕ ಮತ್ತು ರಾಜಕೀಯ ಒತ್ತಡವನ್ನು ವಿರೋಧಿಸಬೇಕೆಂಬ ಮನವರಿಕೆಯುಳ್ಳವರಾಗಿದ್ದರು. ಆದರೂ ಆರಂಭದ ಫ್ರೆಂಚ್-ಕೆನಡಿಯನ್ ಸಾಹಿತ್ಯ ಇಂಗ್ಲಿಷ್-ಕೆನಡಿಯನ್ ಸಾಹಿತ್ಯದಂತೆ ಪ್ರಾಂತ್ಯ ಮಮತೆ, ಸಂಪರ್ಕರಹಿತ ಫ್ರೆಂಚ್ ಸಂಪ್ರದಾಯ, ಸಂಸ್ಕøತಿಗಳನ್ನು ಪ್ರತಿಬಿಂಬಿಸುತ್ತದೆ.

ಕಾನ್‍ಫೆಡರೇಷನ್ ಅನಂತರ ಬಂದ ಅಗ್ರಗಣ್ಯ ಕವಿ ಲೂಯಿ ಫ್ರೆಚೆಟ್. ಈತ ತನ್ನ ಕವನಗಳಲ್ಲಿ ಸಂಯುಕ್ತ ಸಂಸ್ಥಾನದೊಡನೆ ಕೆನಡದ ರಾಜಕೀಯ ವಿಲೀನಕ್ಕೆ ಬೆಂಬಲವನ್ನು ಸ್ಪಷ್ಟಪಡಿಸಿ ಜನರ ಮನಸ್ಸಿನ ಮೇಲೆ ಅನಿರೀಕ್ಷಿತವಾದ ಆಘಾತವನ್ನುಂಟು ಮಾಡಿದ್ದಾನೆ. ವಿಕ್ಟರ್ ಹ್ಯೂಗೋವಿನ ಅಲಂಕಾರಿಕ ಶೈಲಿಯಲ್ಲಿ ರಚಿಸಿರುವ ದೇಶಭಕ್ತಿ ಗೀತೆಗಳ ಸಂಗ್ರಹ ಮತ್ತು ಫ್ರೆಂಚ್ ಅನ್ವೇಷಣಾಕರ ಕಾರ್ಟಿಯರನಿಂದ ಹಿಡಿದು ಲೂಯಿ ರಿಯಲ್‍ವರೆಗಿನ ಫ್ರೆಂಚ್-ಕೆನಡಿಯನರ ಸಾಹಸಮಯ ಕಥೆಯನ್ನೊಳಗೊಂಡ ಲ ಲೆಜೆಂಡೆ ಡನ್ ಪ್ಯೂಪಲ್ ಎಂಬ ಕಾವ್ಯಕೃತಿ ಈತನಿಗೆ ಅಪಾರ ಯಶಸ್ಸನ್ನು ತಂದಿತು. ಗಾರ್ನೂವಿನ ಹಿಸ್ಟರಿ ಆಫ್ ಕೆನಡ ಮತ್ತು ಫ್ರೆಚೆಟ್‍ನ ಕೃತಿ ಫ್ರೆಂಚ್-ಕೆನಡಿಯನರಲ್ಲಿ ದೇಶ, ಭಾಷೆ, ಸಂಸ್ಕøತಿ ಹಾಗೂ ಸಾಹಿತ್ಯಾಭಿಮಾನಗಳನ್ನು ಹೆಚ್ಚಿಸಿದುವು.
19ನೆಯ ಶತಮಾನಾಂತ್ಯದಲ್ಲಿ ಸಾಹಿತ್ಯ ಚಟುವಟಿಕೆ ಕ್ವಿಬೆಕ್‍ನಿಂದ ಮಾಂಟ್ರಿಯಾಲ್‍ಗೆ ಬದಲುಗೊಂಡಿತು. ಸಾಹಿತ್ಯ ಸೃಷ್ಟಿಯಲ್ಲಿದ್ದ ಪ್ರಾದೇಶಿಕ ಮನೋಭಾವ ರಾಷ್ಟ್ರ ಹಾಗೂ ವಿಶ್ವಮನೋಭಾವಕ್ಕೆ ಎಡೆಮಾಡಿಕೊಟ್ಟಿತು. 1895ರಲ್ಲಿ ಜೀನ್ ಶಾರ್‍ಬನೊ ಮತ್ತು ಪಾಲ್ ಡಿ ಮಾಟ್ರಿಯಾಲ್ ಸಾಹಿತ್ಯ ಪಂಥವನ್ನು ಸ್ಥಾಪಿಸಿದರು. ಕೆನಡದ ಜನ, ಜೀವನ, ದೇಶಭಕ್ತಿ, ಪ್ರಾದೇಶಿಕತೆ, ಸಂಸ್ಕøತಿ-ಇವು ಇವರನ್ನು ಆಕರ್ಷಿಸಲಿಲ್ಲ. ಸಾಂಕೇತಿಕ ಕವಿಗಳೂ ಸೌಂದರ್ಯೋಪಾಸಕರೂ ಆದ ಇವರು ಸೌಂದರ್ಯದ ಸನ್ನಿಧಿಯಲ್ಲಿ ಕಾವ್ಯಜೀವನ ನಡೆಸಿದರು. ಶಾರ್‍ಬನೊ ತನ್ನ ಸುರ್ ಲ ಬೋನ ಪೆನ್ಸಿವ್ ಎಂಬ ಕಾವ್ಯದಲ್ಲಿ ವಿವಿಧ ಪುಷ್ಪಗಳು, ಲತಾಗೃಹ ಬುಗ್ಗೆಗಳು, ಹಾಗೂ ಪಾಳು ಗುಡಿಗೋಪುರಗಳಿಂದ ತುಂಬಿದ ಒಂದು ಹರ್ಷಮಯವಾದ ಉದ್ಯಾನಕ್ಕೆ ಓದುಗರನ್ನು ಕರೆದೊಯ್ಯುತ್ತಾನೆ. ಅಲ್ಬರ್ಟ್ ಲೋಜೂó ಸಂಯುಕ್ತ ಕೆನಡದ ಭೂದೃಶ್ಯ, ಪ್ರಕೃತಿ ಸೌಂದರ್ಯವನ್ನು ವರ್ಣಿಸಿದರೆ, ಎಮಿಲಿ ನೆಲಿಗನ್ ಅಂತರ್ಮುಖಿಯಾಗಿ ಆತ್ಮಾನ್ವೇಷಣೆಯಲ್ಲಿ ತೊಡಗಿದ್ದಾನೆ. ತನ್ನ ಆತ್ಮವೇ ;ಒಂದು ಸುಂದರ ವಸ್ತು ಎಂದು ತಿಳಿದು ಅದು ಒಂದು ಐಶ್ವರ್ಯಭರಿತ ಬೃಹದಾಕಾರವಾದ ಸ್ವರ್ಣನೌಕೆ ಎಂದು ವರ್ಣಿಸುತ್ತಾನೆ. ಈ ಪಂಥದ ಮತ್ತೊಬ್ಬ ಇಮೇಜಿಸ್ಟ್ ಕವಿ ಪಾಲ್ ಮೋರಿನ್ ತನ್ನ ಅತ್ಯುತ್ತಮ ಕಾವ್ಯಗಳಲ್ಲಿ ಫ್ರೆಂಚ್-ಕೆನಡವೆಂಬ ಸಂಕುಚಿತ ಭಾವನೆ ತೋರಿಸದೆ ರಾಷ್ಟ್ರ ಹಾಗೂ ವಿಶ್ವಾಭಿಮಾನವನ್ನು ವ್ಯಕ್ತಪಡಿಸಿದ್ದಾನೆ. ಆಲ್ಪ್ರೆಡ್ ಡೆ ರೋಶರ್ಸ್ ಮತ್ತು ಕ್ಲಿಮೆಂಟ್ ಮರ್ಚೆಂಡ್ ಇವರು ಈ ಪಂಥಕ್ಕೆ ಸೇರಿದ ಇತರ ಕವಿಗಳು.

ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಶ್ರೇಷ್ಠ ಸಾಹಿತ್ಯ ಸೃಷ್ಟಿಯ ಮೂಲಕ ಫ್ರೆಂಚ್-ಕೆನಡಿಯನ್ನರ ಸಹಜ ವ್ಯಕ್ತಿತ್ವ ಹಾಗೂ ಸಾಹಿತ್ಯದ ಹಿರಿಮೆ ಬೆಳಕಿಗೆ ಬಂದವು. ರಾಬರ್ಟ್ ಶಾರ್‍ಬನೊ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕನಾಗಿ, ಶ್ರೇಷ್ಠ ಕಾದಂಬರಿಕಾರನಾಗಿ ಪ್ರಸಿದ್ಧನಾದ. ಡೆನಿಸ್ ಗಾರ್ನೂವಿಗೆ ಕಾವ್ಯ ತನ್ನಲ್ಲಿನ ನಿರಾಶಾ ಮೂಲವನ್ನು ಕಾಣಿಸುವ ಒಂದು ಸಾಧನವಾಯಿತು. ಇವನ ತೀವ್ರ ಭಾವಪೂರ್ಣತೆ ಮತ್ತು ಉಚ್ಚಮಟ್ಟದ ಕಾವ್ಯತಂತ್ರ ಇವನ ಅನಂತರ ಬಂದ ಕವಿಗಳ ಮೇಲೆ ದೊಡ್ಡ ಪ್ರಭಾವವನ್ನು ಬೀರಿವೆ. ಫ್ರಾಂ ಸ್ವಾಹರ್ಟೆಲ್ ವಿನೋದ ಪ್ರವೃತ್ತಿಯ ಹಾಗೂ ದ್ವಂದ್ವ ದೃಷ್ಟಿಯುಳ್ಳ ಕವಿ. ತನ್ನ ಕಾವ್ಯದಲ್ಲಿ ತನ್ನ ಧಾರ್ಮಿಕ ಅಶಾಂತಿ ಮತ್ತು ಅಧ್ಯಾತ್ಮಿಕ ಪ್ರತಿಭಟನೆಗಳನ್ನು ವ್ಯಕ್ತಪಡಿಸಿಕೊಂಡಿದ್ದಾನೆ. ಮನೋಜ್ಞ ಕವಿ ಆಲೆನ್ ಗ್ರ್ಯಾಂಡ್ ಬಾ ತನ್ನ ಮನಸ್ಸಿನಲ್ಲಿ ಉದ್ಭವಿಸುವ ಘೋರ ಸ್ವಪ್ನಗಳನ್ನು ವಿಶ್ವಪ್ರತಿಮೆಗಳನ್ನಾಗಿ (ಕಾಸ್ಮಿಕ್ ಇಮೇಜಸ್) ಮಾರ್ಪಾಡುಮಾಡಿದ್ದಾನೆ. ಅದೃಶ್ಯವಾಗುವ ಜಗತ್ತುಗಳು, ಕಗ್ಗತ್ತಲಿನಲ್ಲಿ ಕಪ್ಪುಕಣ್ಣುಗಳು, ವೇಗವಾಗಿ ಹರಿಯುವ ಕಪ್ಪುನದಿಯ ಕೆಲವು ನಿದರ್ಶನಗಳು. ಮಾಂಟ್ರಿಯಾಲ್‍ನಲ್ಲಿ ಹೆಕ್ಸ್‍ಗನ್ ಗ್ರೂಪನ್ನು ಸ್ಥಾಪಿಸಿದ ಬಹಳ ಉತ್ಸಾಹಪೂರ್ಣಕವಿ ಜೀನ್ ಗೈ ಪಿಲಾನ್. ರೋನಾಲ್ಡ್ ಜಿಗರ್‍ನ ಶ್ರೇಷ್ಠ ಕವನಗಳಲ್ಲಿ ಅತಿವಾಸ್ತವಿಕತೆಯ ಪ್ರಭಾವ ಸುಸ್ಪಷ್ಟವಾಗಿದೆ.

ಇಬ್ಬರು ಶ್ರೇಷ್ಠ ಕವಯಿತ್ರಿಯರನ್ನು ಇಲ್ಲಿ ಹೆಸರಿಸಬಹುದು. ಹಳೆಯ ಒಡಂಬಡಿಕೆಯ ಸ್ತ್ರೀರತ್ನಗಳಿಂದ ಪ್ರಭಾವಿತಳಾದ ರೀನಾ ಲೆಸ್ನಿಯರ್ ತನ್ನ ಎಸ್ಕಲೆಸ್, ಪ್ರೆಸೆನ್ಸ್ ಡಿ ಲ ಆಬ್ಸೆನ್ಸ್ ಮತ್ತು ಇತ್ತೀಚಿನ ಮೆಮಾಯಿರ್ ಸ್ಯಾನ್ಸ್ ಜೂರ್ ಎಂಬ ಕಾವ್ಯ ಕೃತಿಗಳಿಂದ ಪ್ರಸಿದ್ಧಳಾಗಿದ್ದಾಳೆ. ಆನೆ ಹೆಬರ್ಟ್ ಸಮಕಾಲೀನ ಕವಿಗಳಲ್ಲಿ ಹೆಚ್ಚಿನ ಪ್ರತಿಭೆ ಹಾಗೂ ಉತ್ತಮ ಕಾವ್ಯಕಲೆಯುಳ್ಳವಳು. ಸಾಂಗ್ಸ್ ಎನ್ ಈಕ್ವಿಲಿಬ್ರೆ, ಪೊಯಮ್ಸ್, ಲೆ ಟಾರೆಂಟ್, ಲೆ ಚೇಂಬರ್ಸ್ ಡಿಬೊ-ಇವು ಈಕೆಯ ಪ್ರಖ್ಯಾತ ಕಾವ್ಯ ಸಂಗ್ರಹಗಳು. 

ಪ್ರಾರಂಭದ ಫ್ರೆಂಚ್-ಕೆನಡಿಯನ್ ಕಾದಂಬರಿಯಲ್ಲೂ ಪ್ರಾದೇಶಿಕತೆಗೆ ಆದ್ಯತೆ ದೊರೆತಿದೆ. ನೆಲ, ಜನ, ಭಾಷೆ, ಧರ್ಮ, ಸಂಸ್ಕøತಿ-ಇವುಗಳ ಬಗ್ಗೆ ಹೆಚ್ಚಿನ ಮಮತೆ ಅಲ್ಲಿ ಬಹಳವಾಗಿ ಕಾಣುತ್ತದೆ. ಫ್ರೆಂಚ್-ಕೆನಡದ ಮೊಟ್ಟ ಮೊದಲ ಕಾದಂಬರಿ ಪಿ.ಎ.ಡಿ ಗ್ಯಾಸ್ಪೆ (ಜೂ.) ವಿರಚಿತ ಲೆ ಚೆರ್ಚೂರ್ ಡಿ ಟ್ರೆಸೋರ್. ಸಾಹಸ ಮತ್ತು ಯಕ್ಷಿಣೇ ವಿದ್ಯೆ ಇದರ ಕಥಾವಸ್ತು. ಪಿ.ಎ.ಡಿ ಗ್ಯಾಸ್ಪೆಯ (ಸೀ) ಲೆ ಏನ್ಸಿಯೆನ್ಸ್ ಕೆನಡಿಯೆನ್ಸ 19ನೆಯ ಶತಮಾನದ ಪ್ರಖ್ಯಾತ ಕಾದಂಬರಿ ಎಂದು ಹೆಸರು ಪಡೆದಿದೆ. ಪಿ.ಜೆ.ಒ. ಶಾವೂವಿನ ಚಾಲ್ರ್ಸ್ ಗೆರಿನ್ ಮತ್ತು ಆಂಟಾನ್ ಗೆರಿನ್ ಲೆಜೋಯಿಯ ಜೀನ್ ರಿವಾರ್ಡ್ ಎಂಬ ಕಾದಂಬರಿಗಳೂ ವಲಸೆಬಂದು ನೆಲಸಲಪೇಕ್ಷಿಸಿದ ಫ್ರೆಂಚ್ ಜನ ಪ್ರಾರಂಭದಲ್ಲಿ ಎದುರಿಸಬೇಕಾಗಿಬಂದ ಕಷ್ಟ, ಸಮಸ್ಯೆಗಳನ್ನು ಕುರಿತವಾಗಿವೆ. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಲೂಯಿ ಹಮಾನನ ಮೇರಿಯಾ ಚಾಪ್ ಡಿ ಲೇನ್ ಸಹ ದೇಶಪ್ರೇಮವನ್ನು ಜಾಗೃತಗೊಳಿಸುವ ಕಾದಂಬರಿ, ಕ್ಲಾಡ್ ಹೆನ್ರಿ ಗ್ರಿಗ್ ನಾನ್ ತನ್ನ ಅನ್ ಹೋಂ ಎಟ್ ಸನ್ ಪೀಛೇ ಮತ್ತು ಲೆ ಡೆಸರ್ಟರ್ ಕಾದಂಬರಿಗಳಲ್ಲಿ ಯುವಕರು ತಮ್ಮ ನಾಡನ್ನು ತ್ಯಜಿಸಿ ಪರನಾಡಿಗೆ ವಲಸೆ ಹೋಗುವುದನ್ನು ವರ್ಣಿಸಿದ್ದಾನೆ. ಪೂರ್ವಿಕರ ಕುಟುಂಬವೊಂದು ಕ್ಷೀಣಿಸಿದ ರೀತಿಯನ್ನು ಹಾಗೂ ರೈತಾಪಿ ಜನಗಳ ಜೀವನವನ್ನು ಕುರಿತು ಜರ್ಮೈನ್ ಗೌರ್‍ಮಂಟ್ ಬರೆದಿರುವ ಲೆ ಸರ್ವೆನ್ಯಾಂಟ್ ಮತ್ತು ಮೇರಿ-ಡಿಡೇಸ್ ಎಂಬ ಎರಡು ಕಾದಂಬರಿಗಳನ್ನು ಇಲ್ಲಿ ಹೆಸರಿಸಬಹುದು.

ಈ ಶತಮಾನದ ಪೂರ್ವಾರ್ಧದಲ್ಲಿ ಹೊರಬಂದ ಐತಿಹಾಸಿಕ ಕಾದಂಬರಿಗಳೆಲ್ಲ ಕೆನಡದ ಗತಕಾಲದ ವೈಭವವನ್ನು ವ್ಯಾಪಕವಾಗಿ, ಸಮಗ್ರವಾಗಿ ವರ್ಣಿಸಿವೆ. ಇವುಗಳಲ್ಲಿ ರಾಬರ್ಟ್ ಡಿ ರಾಕ್‍ಬ್ರೂನ್ ಮತ್ತು ಲಿಯೋಪಾಲ್ ಡೆಸ್ರೋಸಿಯರ್ಸ್-ಇವರ ಕಾದಂಬರಿಗಳು ಮುಖ್ಯವಾದವು. ಗೇಬ್ರಿಯಲ್ ರಾಯಳ ಬಾನ್‍ಹ್ಯುರ್ ಡಿ'ಅಕೇಷನ್ ಎಂಬುದು ಮಾಂಟ್ರಿಯಾಲ್‍ನ ಕಾರ್ಮಿಕರ ಜೀವನವನ್ನು ಚಿತ್ರಿಸುವ ಅತ್ಯುತ್ತಮ ಕಾದಂಬರಿಯೆಂದು ಪ್ರಸಿದ್ಧಿಯಾಗಿದೆ. ಅಲೆಕ್ಸಾಂಡರ್ ಚೆನೆವರ್ಟ್ ಎಂಬ ಈಕೆಯ ಇನ್ನೊಂದು ಕಾದಂಬರಿ ನಗರದ ಅರ್ಥರಹಿತ ಹಾಗೂ ಕೃತ್ರಿಮ ಜೀವನವನ್ನು ಚಿತ್ರಿಸುತ್ತದೆ. ರ್ಯೂ ಡೆಶ್ಚಾಂಬುಲ್ಟ್ ಎಂಬುದು ಈಕೆಯ ಆತ್ಮಚರಿತ್ರೆಯನ್ನೊಳಗೊಂಡ ಕಾದಂಬರಿ. ಈಕೆಯ ಸಮಕಾಲೀನನಾದ ರೋಜರ್ ಲೆಮ್ಲಿನ್ ಲಸಹ ತನ್ನ ಆ ಪೈಡ್ ಡಿ ಲ ಪೆಂಟೆಡೂಸ್, ಲೆ ಪ್ಲೂಫ್ ಮತ್ತು ಪಯರ್ ಡಿ ಮ್ಯಾಗ್ನಿಫಿಕ್ ಕಾದಂಬರಿಗಳಲ್ಲಿ ಕ್ವಿಬೆಕ್ ನಗರದಲ್ಲಿನ ಜೀವನವನ್ನು ಚಿತ್ರಿಸಿದ್ದಾನೆ. ಐವ್ಸ್ ತೆರಿಯಾಲ್ಟ್ ಎಂಬ ಲೇಖಕ ಯಹೂದಿ, ಎಸ್ಕಿಮೊ ಮತ್ತು ಸ್ಥಳೀಯ ಇಂಡಿಯನ್ನರ ಜೀವನ ವಿಧಾನವನ್ನೊಳಗೊಂಡ ಎರಾನ್, ಎಗಾಗುಕ್ ಮತ್ತು ಎಷಿನಿ ಎಂಬ ಮೂರು ಕಾದಂಬರಿಗಳನ್ನು ಬರೆದಿದ್ದಾನೆ. ಗೆರಾರ್ಟ್ ಬೆಸೆಟ್‍ನ ಲ ಬಗಾರೆ ಮತ್ತು ಲೆ ಪೆಡಗಾಗ್ಸ್-ಎಂಬುವು ಫ್ರೆಂಚ್-ಕೆನಡದ ಸಾಮಾಜಿಕ ಜೀವನ ಹಾಗೂ ವಿದ್ಯಾಭ್ಯಾಸಗಳನ್ನು ನಿರೂಪಿಸುವ ಕಾದಂಬರಿಗಳು. ರಾಬರ್ಟ್ ಶಾರ್‍ಬನೊ ತನ್ನ ಫಾಂಟೈಲ್, ಲೆ ಡಿಸೈರ್ಸ್ ಎಟ್ ಲೆ ಜೂರ್ಸ್ ಎಂಬ ಕಾದಂಬರಿಗಳಲ್ಲಿ ಮನುಷ್ಯನ ಆತ್ಮವಿಕಾಸವಾಗುವ ಕಾಲದಲ್ಲೇ ಹೇಗೆ ಬಾಡಿ ಹೋಗುತ್ತದೆ ಎಂಬುದನ್ನು ಚಿತ್ರಿಸಿದ್ದಾನೆ. ಅಂದ್ರೆ ಗಿರೂ, ರಾಬರ್ಟ್ ಐಲ್, ಆಂದ್ರೆ ಲಾಂಗೆವಿನ್-ಇವರು ಇತ್ತೀಚಿನ ಪ್ರಸಿದ್ಧ ಕಾದಂಬರಿಕಾರರು.

ಕೆನಡದಲ್ಲಿ ಕಾವ್ಯ ಮತ್ತು ಕಾದಂಬರಿಯ ಹಾಗೆ ನಾಟಕಸಾಹಿತ್ಯ ಅಷ್ಟೇನೂ ಗಮನಾರ್ಹ ಪ್ರಗತಿ ಸಾಧಿಸಿಲ್ಲ. ಇಪ್ಪತ್ತನೆ ಶತಮಾನದ ಮೊದಲ ದಶಕದಲ್ಲಿ ಹೊರ ಬಂದ ಲೂಯಿ ಫ್ರೆಚೆಟ್ನ ವೆರೋನಿಕ ಎಂಬುದು ಹೆಸರುವಾಸಿಯಾದ ನಾಟಕ. 1951ರಲ್ಲಿ ಲಿ ಥಯೇಟರ್ ಡು ನೊವೂ ಮಾಂಡೆ ಮತ್ತು 1956ರಲ್ಲಿ ಲಾ ಕಾಡಿಮೆ ಕೆನಡಿಯನ್ ಎಂಬ ಎರಡು ನಾಟಕ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದು ನಾಟಕ ಕಲೆಗೆ ಒಂದು ಹೊಸ ಚೈತನ್ಯ ತಂದುವು. ಗ್ರಾಷಿಯನ್ ಗೆಲಿನಾಸ್ ಎಂಬಾತ ಟಿಟ್ಕಾಕ್ ಮತ್ತು ಬೊಸಿಲ್ ಎಟ್ ಲೆ ಜಸ್ಟೀಸ್ ಎಂಬ ನಾಟಕಗಳ ಕರ್ತೃವಾಗಿ ಮತ್ತು ಪ್ರಧಾನ ಅಭಿನಯಕಾರನಾಗಿ ಅಪಾರ ಯಶಸ್ಸುಗಳಿಸಿದ್ದಾನೆ. ಆಧುನಿಕ ನಾಟಕಕಾರರಾದ ಮೆರಿಲ್ ಡೆನಿಸನ್, ಪೆಟ್ರಿಷಿಯ ಜೋಡ್ರ್ರೆ, ರಾಬರ್ಟ್‍ಸನ್ ಡೇವಿಸ್, ಎಲಾಯ್ ಡಿ ಗ್ರಾಂಡ್‍ಮಾಂಟ್, ರಾಬರ್ಟ್ ಎಲಿ, ಆಂದ್ರೆ ಲಾರೆಂಡೊ ಮತ್ತು ಮಾರ್ಸೆ ದೂಬೆ-ಇವರು ಸಾಮಾಜಿಕ, ಐತಿಹಾಸಿಕ ನಾಟಕಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. 
 											(ಜಿ.ಆರ್.)

ಕೆನಡದಲ್ಲಿ ಪ್ರಾರಂಭದಲ್ಲಿ ಫ್ರೆಂಚ್ ಭಾಷೆಯಲ್ಲಿ ಬರೆದವರು 16ನೆಯ ಮತ್ತು 17ನೆಯ ಶತಮಾನಗಳ ಪ್ರಥಮ ಅನ್ವೇಷಕರು ಮತ್ತು ಧರ್ಮ ಪ್ರಚಾರಕರು. ಇವರು ತಮ್ಮ ಹಿಂದಿನ ಸಾಹಸಿಗಳ ವಿಷಯವಾಗಿಯೂ ಬರೆದರು.
ಇಂಗ್ಲಿಷರು ಕೆನಡವನ್ನು ಗೆದ್ದುದರಿಂದ ಫ್ರೆಂಚ್ ಭಾಷೆಯನ್ನಾಡುತ್ತಿದ್ದ ಕೆನಡಿಯನರಿಗೆ ಆದ ಅಸಮಾಧಾನವು 1840ರ `ಯೂನಿಯನ್ ಆ್ಯಕ್ಟ್ ಮತ್ತು 1867ರ ಕಾನ್‍ಫೆಡರೇಷನ್‍ಗಳಿಂದ ಆಳವಾಯಿತು; ಫ್ರೆಂಚ್ ಕೆನಡಿಯನ್ ಅಭಿಮಾನ ಗರಿಗೆದರಿತು.	ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ನೆರಿನಿ ಬೂಷ್‍ಮಿ ಮತ್ತು ಅವನನ್ನು ಅನುಸರಿಸಿದ ಕವಿಗಳು ರೈತ ಮತ್ತು ಪ್ರದೇಶಗಳ ಮತ್ತು ರೈತ ಮತ್ತು ಪೂರ್ವಿಕರ ನೆಲದ ಸಂಬಂಧಗಳನ್ನು ಹಾಡಿಹೊಗಳಿದರು. 1895ರಿಂದ 1930ರವರೆಗೆ ಪ್ರಭಾವಶಾಲಿಯಾಗಿದ್ದ ಮಾಟ್ರಿಯೆಲ್ ಪಂಥದ ಕವಿಗಳು ಫ್ರಾನ್ಸಿನ ಸಾಹಿತ್ಯದ ಪ್ರಭಾವಕ್ಕೆ ಒಳಗಾದರು.
ನಗರೀಕರಣ, ದೇಶದ ಆರ್ಥಿಕ ಮುಗ್ಗಟ್ಟು ಮತ್ತು ಎರಡನೆಯ ಪ್ರಪಂಚದ ಯುದ್ಧಗಳಿಂದಾಗಿ ಫ್ರೆಂಚ್ ಕೆನಡ ಸಾಂಸ್ಕøತಿಕವಾಗಿ ದೂರ ಉಳಿಯುವುದು ಸಾಧ್ಯವಿಲ್ಲವಾಯಿತು.

20ನೆಯ ಶತಮಾನದ ಪ್ರಮುಖ ಕವಿಗಳಲ್ಲಿ ಆ್ಯನ್ ಹರ್ಬರ್ಟ್ ಒಬ್ಬಳು; ಈಕೆ ಸರಿಯಲಿಸ್ಟ್ ಪ್ರತೀಕ ಪಂಥದಲ್ಲಿ ಬರೆದಳು. ಮಾನಸಿಕ ಯಾತನೆ, ಏಕಾಂತತೆ, ನಾವು ಇವು ಇವಳ ಕವನಗಳ ವಸ್ತುಗಳು. ಪಾಲ್ ಮರೀ ಲಪಾಂಯ್ ಆಧುನಿಕ ಜಗತ್ತಿನ ರೀತಿ ನೀತಿಗಳನ್ನು ವಿಷಾದದಿಂದ ಕಾಣುತ್ತಾನೆ. ಗೇಬ್ರಿಯಲ್ ರಾಯ್ ಬರೆದ ಕಾದಂಬರಿಯಲ್ಲಿ ಕೈಗಾರಿಕೀಕರಣದ ಅನಾರೋಗ್ಯಕರ ಪರಿಣಾಮಗಳ ಮತ್ತು ನಗರ ಜೀವನದಲ್ಲಿ ಮಾನವೀಯ ಘನತೆಯ ನಷ್ಟದ ನಿರೂಪಣೆ ಇದೆ.
										
(ಪರಿಷ್ಕರಣೆ: ಪ್ರೊ.ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ